Thursday, April 24, 2008

ಕನ್ನಡದಲ್ಲಿ ಬ್ಲಾಗುಗಳು

ಪ್ರಾಜೆಕ್ಟ್ ಮುಗಿದು ಖಾಲಿ ಕುಳಿತಿದ್ದೇನೆ. ಏನು ಮಾಡೋದು ಅಂತ ವಿಚಾರ ಮಾಡ್ತಾ ಇದ್ದೆ. ಕನ್ನಡ ಬ್ಲಾಗುಗಳನ್ನು ಹುಡುಕೋಣ ಅಂತ ಅನಿಸ್ತು. ಗೂಗಲ್ ನಲ್ಲಿ ಹುಡುಕಿದಾಗ ನನಗೆ ಸತೀಶ್ ಕುಮಾರ್ ಅವರ "ಅಂತರಂಗ" ಅನ್ನೋ ಬ್ಲಾಗು ಸಿಕ್ತು. ಅದರಲ್ಲಿನ ಪೋಸ್ಟ್ ಗಳನ್ನು ಓದ್ತಾ ಹೋದ ಹಾಗೆ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತ ಕೆಲವು ವಿಷಯಗಳು ನೆನಪಿಗೆ ಬಂದವು. ವಿಭಕ್ತಿ ಪ್ರತ್ಯಯಗಳು, ಸಂಧಿ, ಸಮಾಸಗಳು ಎಲ್ಲ ನೆನಪಾದವು. ಅದರ ಜೊತೆಗೆ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನ ಜನ ಮಾಡುವ ಕನ್ನಡದ ಕೊಲೆಯೂ ನೆನಪಾಯಿತು. ಧೀರ್ಘ (ಬೆಂಗಳೂರು ಭಾಷೆಯಲ್ಲಿ ದೀರ್ಗ), ಹೃಸ್ವ, ಅಲ್ಪಪ್ರಾಣ, ಮಹಾಪ್ರಾಣ ಎಲ್ಲವನ್ನೂ ಮರೆತಿದ್ದಾರೆ. ಅವರು ಕನ್ನಡವನ್ನೇ ಮರೆತಿದ್ದಾರೆ ಅಂದರೂ ಅತಿಶಯೋಕ್ತಿಯಗದು. ಯಾವದೇ ಕನ್ನಡ ಟಿವಿ ಚಾನೆಲ್ ನೋಡಿ (ಕೇಳಿ). ಕನ್ನಡದ ಕೊಲೆ ಹೇಗೆ ಮಾಡೋದು ಅಂತ ಗೊತ್ತಾಗುತ್ತದೆ.
ಇರಲಿ, ಅಂತರಂಗದಲ್ಲಿನ ಕೆಲವು ಬರಹಗಳನ್ನು ಓದಿದೆ. ಚೆನ್ನಾಗಿ ಬರೆದಿದ್ದಾರೆ ಸತೀಶ್ ಅವರು. ಅವರ ಬೇವು-ಬೆಲ್ಲ ಇರದ ಹೊಸ ವರ್ಷಗಳು - ನಾನು ಮುಂಬಯಿಯಲ್ಲಿ ಒಬ್ಬನೇ ಕಳೆದ ಕೆಲವು ಯುಗಾದಿ ಹಬ್ಬಗಳ ಇದ್ದದ್ದು ನೆನಪಿಗೆ ತಂದಿತು,
ವಿಭಕ್ತಿಯ ಬಗೆಗಿನ ಭಕ್ತಿ - ನನ್ನ ಶಾಲಾ ದಿನಗಳನ್ನು ಮತ್ತೆ ನನ್ನ ಕಣ್ಣ ಮುಂದೆ ತಂದಿಟ್ಟಿತು. ಆ ದಿನಗಳನ್ನು ಮೆಲಕು ಹಾಕುತ್ತಾ ಕುಳಿತಿದ್ದೇನೆ.